ಎಂ.ಚಿದಾನಂದಮೂರ್ತಿ  :-
	ಸಮಕಾಲೀನ ಶ್ರೇಷ್ಠ ಕನ್ನಡ ಸಂಶೋಧರರಲ್ಲಿ ಚಿದಾನಂದಮೂರ್ತಿ ಪ್ರಮುಖರು. ಅವರು ಸಂಶೋಧಕರಾಗಿಯೇ ಅಲ್ಲದೆ ಕನ್ನಡ ಹೋರಾಟಗಾರರಾಗಿಯೂ ಪ್ರಸಿದ್ಧರು. ಕನ್ನಡ-ಕನ್ನಡಿಗ-ಕರ್ನಾಟಕತ್ವಗಳಿಗೋಪುರ ಯಾವುದೇ ಹಿಂಜರಿಕೆ. ಭಯಗಳಿಲ್ಲ ಅಳುಕು ಥಳುಕುಗಳಿಲ್ಲವೆ ಪ್ರಾಣತ್ಯಾಗಕ್ಕೆ ಕೂಡ ಆ ಪ್ರಯತ್ನಿಸಿದ್ದ ಧೀರರು ಅವರು.

	ಚಿದಾನಂದಮೂರ್ತಿ 1931ರ ಮೇ 10ನೆಯ ತಾರೀಖಿನಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಹುಟ್ಟಿದರು. ಅವರ ತಂದೆ ಕೊಟ್ಟೂರಯ್ಯನವರಿಗೆ ಇವರು ಎರಡನೆಯ ಮಗು, ಮೊದಲನೆಯ ಮಗ. ತಾಯಿ ಪಾರ್ವತಮ್ಮ, ತಂದೆ ಚನ್ನಗಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಉಪಾಧ್ಯಾಯರು. ತಂದೆ-ತಾಯಿಯರು ಚಲ, ಹಠ, ಕಷ್ಟಸಹಿಷ್ಣುತೆ, ಸ್ವಾಭಿಮಾನ, ನೇರತೆಯ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ಸಹಜವಾಗಿಯೇ ಅವು ಮೂರ್ತಿಯವರಿಗೂ ದತ್ತವಾದವು.

	ಮೂರ್ತಿಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೇಬೆನ್ನೂರುಗಳಲ್ಲಿ ನಡೆದುವು. ಚೂಟಿಯಾಗಿದ್ದ ಅವರು ತರಗತಿಯಲ್ಲಿ ಮೊದಲ ಸ್ಥಾನ ಪಡೆಯುತ್ತಿದ್ದರು. ದಾವಣಗೆರೆಯಲ್ಲಿ ತಮ್ಮ ಪ್ರೌಢಶಾಲೆಯ ಹಾಗೂ ಇಂಟರ್ ವಿದ್ಯಾಭ್ಯಾಸ ನಡೆಸಿದರು. ನಾಡಿಗೇರ ಗೋವಿಂದರಾಯ, ವಿ.ಎ.ತ್ಯಾಗರಾಜನ್, ಎಲ್. ಬಸವರಾಜು, ಜಿ.ಎಸ್. ಶಿವರುದ್ರಪ್ಪ ಆ ಕಾಲದ ಅವರ ಅಧ್ಯಾಪಕ ವೃಂದದ ಪ್ರಮುಖರು. ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಅವರು ಹತ್ತನೆಯ ಸ್ಥಾನಗಳಿಸಿದರು. ಮುಂದೆ ಮನೆಯವರ ಇಚ್ಛೆ ನಿರೀಕ್ಷೆಗಳಂತೆ ಮೆಡಿಕಲ್ ಅಥವಾ ಇಂಜಿನಿಯರಿಂಗ್‍ಗೆ ಸೇರದ ಕನ್ನಡ ಆನರ್ಸ್ ಸೇರಿದರು. ಕುವೆಂಪು, ಡಿ.ಎಲ್.ನರಸಿಂಹಾಚಾರ್, ಕ.ವೆಂ.ರಾಘವಾಚಾರ್, ಎಸ್.ಶ್ರೀಕಂಠಶಾಸ್ತ್ರಿಗಳಂಥ ಮಹಾ ಅಧ್ಯಾಪಕರ ಮಾರ್ಗದರ್ಶನದಲ್ಲಿ, ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ರ್ಯಾಂಕ್ ಅಲ್ಲದೆ, ಆಲ್ ಆನರ್ಸ್ ಚಿನ್ನದ ಪದಕ ಪಡೆದರು (1953) ಬಳಿಕ ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದರು. ಮತ್ತೆ ರಜೆ ಹಾಕಿ ಮೈಸೂರಿನಲ್ಲಿ ಕನ್ನಡ ಎಂ.ಎ.ಪದವಿಯನ್ನು ಪ್ರಥಮವರ್ಗ ಪ್ರಥಮಸ್ಥಾನದೊಂದಿಗೆ ಗಳಿಸಿದರು. (1957). ಚಿದಾನಂದಮೂರ್ತಿ ಶ್ರೇಷ್ಠ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಎಂಬುದನ್ನು ಈ ವಿವರಗಳು ದೃಢಪಡಿಸುತ್ತವೆ.

	ಎಂ.ಎ. ಓದುವಾಗಲೇ ಡಿ.ಎಲ್.ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಾರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಅದರ ಫಲವಾಗಿ ಬಂದ ಲೇಖನ `ಪಂಪಕವಿ ಮತ್ತು ಮೌಲ್ಯಪ್ರಸಾರ ಆ ಮೂಲಕ ಶಾಸನ ಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು `ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ ಎಂಬ ನಿಬಂಧ ಸಿದ್ಧಪಡಿಸಿ ತೀ.ನಂ.ಶ್ರೀಕಂಠಯ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ (1964) ಪಡೆದರು. ಈ ನಿಬಂಧ ಕನ್ನಡ ಸಂಶೋಧನ ಕ್ಷೇತ್ರದ ಸಾರ್ವಕಾಲಿಕ ಪರಾಮರ್ಶನ ಕೃತಿಯಾಗಿದೆ.

	ಆರಂಭದ ಕೆಲವು ವರ್ಷ ಪದವಿಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು. 1968ರವರೆಗೆ ಅಲ್ಲಿ ಅಧ್ಯಾಪಕರಾಗಿ, ಕನ್ನಡ ರೀಡರ್ ಆಗಿದ್ದು ಬಳಿಕ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿದರು. ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿ 1990ರ ಅಕ್ಟೋಬರ್ 10ರಂದು ಸ್ವಯಂಸೇವಾ ನಿವೃತ್ತಿ ಪಡೆದರು. 1967-68ರಲ್ಲಿ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ `ಡ್ರಿಲ್ ಟೀಚರ್ ಆಗಿ, 1979ರ ಅಂತ್ಯ ಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಮೂರ್ತಿಗಳು ಕೆಲಸ ಮಾಡಿದ್ದಾರೆ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಥೈಲ್ಯಾಂಡ್, ಜಪಾನ್, ಹವಾಯ್, ಸ್ವಿಟ್ಸರ್ಲೆಂಡ್ ಮುಂತಾದ ದೇಶಗಳನ್ನು ಅವರು ಸುತ್ತಿದ್ದಾರೆ. ಸಂಶೋಧನೆಗೆ, ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳನ್ನು ಅವರು ವ್ಯಾಪಕವಾಗಿ ಸುತ್ತಿದ್ದಾರೆ. ಬಕ್ರ್ಲಿಯಲ್ಲಿ ನಡೆದ ಅಮೆರಿಕನ್ ಓರಿಯಂಟಲ್ ಸೊಸೈಟಿಯ ವಾರ್ಷಿಕಾಧಿವೇಶನ, ಫಿಲಿಡೆಲ್ಫಿಯದಲ್ಲಿ ನಡೆದ ಏಷಿಯನ್ ಸೆಮಿನಾರ್, ಸ್ಟಾನ್‍ಫೋರ್ಡ್ ವಿಶ್ವವಿದ್ಯಾನಿಲಯದ ಐತಿಹಾಸಿಕ ಭಾಷಾವಿಜ್ಞಾನ ಸಮ್ಮೇಳನಗಳಲ್ಲಿ ಅವರು ಪ್ರಬಂಧ ಮಂಡಿಸಿದ್ದಾರೆ. ಈ ಎಲ್ಲವೂ ಅವರ ನಿರಂತರ ಅಧ್ಯಯನಶೀಲತೆ ಮತ್ತು ವಿದ್ವತ್ತಿನ ಸೂಚಕಗಳಾಗಿವೆ.

	ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರದು ಚಿರಸ್ಮರಣೀಯವಾದ ದೊಡ್ಡ ಹೆಸರು. ಯುಗಪ್ರವರ್ತನೆಯ ಸಂಶೋಧಕ, ಸಂಶೋಧನೆಯ ಸಂಶೋಧಕ, ಸಂಸ್ಕøತಿ ಸಂಶೋಧಕ, ತೀ.ನಂ.ಶ್ರೀ. ಉತ್ತರಾಧಿಕಾರಿ ಎಂಬೆಲ್ಲ ಹೊಗಳಿಕೆಗೆ ಮೂರ್ತಿಗಳು ಪಾತ್ರರಾಗಿದ್ದಾರೆ. ಹತ್ತಿರ ನಾಲ್ಕು ದಶಕಗಳಿಂದ ಅವರು ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಬಂದಿದ್ದಾರೆ. ಈಗ ಅವರ ಜೀವನದ ಧ್ಯೇಯ, ಉದ್ದೇಶಗಳು ಬೇರೆ ಆಗಿದ್ದರೂ ಅವರ ಅಂತರಾಳದ ಸಂಶೋಧಕ ಮರೆಯಾಗಿಲ್ಲ. ಸಂಶೋಧನೆಗೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸುತ್ತಲೇ ಇರುತ್ತಾರೆ. ಈ ಕ್ಷೇತ್ರದಲ್ಲಿ ನಲವತ್ತು ವರ್ಷ ಶ್ರಮಿಸಿ ದುಡಿದಿರುವುದೇ ಅಸಾಧಾರಣವಾದ ಸಾಧನೆ.

	ಚಿದಾನಂದಮೂರ್ತಿ ಈವರೆಗೂ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಮುನ್ನೂರ ಐವತ್ತಕ್ಕೂ ಹೆಚ್ಚು ಸಂಪಬಂಧಗಳನ್ನು ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ಣಾಟಕದ ಇತಿಹಾಸ-ಸಂಸ್ಕøತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ. ಅವರ ಸಂಶೋಧನೆಯಲ್ಲಿ ವ್ಯಾಪಕವಾದ ವ್ಯಾಸಂಗ, ಆಳವಾದ ಅಧ್ಯಯನ, ಅಪಾರವಾದ ಪರಿಶ್ರಮ, ಮಿಂಚಿನ ಪ್ರತಿಭೆ ಮಿಲನಗೊಂಡಿವೆ. ಇದರಿಂದ ಅವರ ಪ್ರತಿಯೊಂದು ಬರೆಹವೂ ಸಂಶೋಧನೆ, ಹೊಸತನಗಳಿಂದ ಹೊಳೆಯುತ್ತವೆ.

	ಅವರ `ಭಾಷಾವಿಜ್ಞಾನದ ಮೂಲತತ್ತ್ವಗಳು (1965), ವಾಗರ್ಥ (1981) ಎಂಬ ಭಾಷಾಸಂಬಂಧವಾದ ಕೃತಿಗಳು. `ಛಂದೋತರಂಗ ಛಂದಸ್ಸಿಗೆ ಸಂಬಂಧಿಸಿದ ಅವರ ಇಪ್ಪತ್ತೈದು ಲೇಖನಗಳ ಸಂಕಲನ. ಮೂರ್ತಿಗಳು ಕವಿರಾಜಮಾರ್ಗ ಕಾಲ ಕನ್ನಡ ಸಾಹಿತ್ಯದಿಂದ ಹಿಡಿದು ಈಚಿನ ಮುದ್ದಣನವರೆಗೆ, ಕನ್ನಡ ಸಾಹಿತ್ಯ ಚರಿತ್ರೆಯ ಕ್ಷೇತ್ರದಲ್ಲಿ ವಿಪುಲವಾಗಿ ಕೆಲಸ ಮಾಡಿದ್ದಾರೆ. ಈ ಸಂಬಂಧವಾದ ಅವರ ಬರಹಗಳು ಏಳೆಂಟು ಪುಸ್ತಕಗಳಲ್ಲಿ ಹಂಚಿಹೋಗಿವೆ. `ಸಂಶೋಧನ ತರಂಗದ ಎರಡು ಸಂಪುಟಗಳು, `ಲಿಂಗಾಯತ ಅಧ್ಯಯನಗಳು, `ಹೊಸತು ಹೊಸತು ಈ ದೃಷ್ಟಿಯಿಂದ ಮುಖ್ಯವಾದವು.

	ವೀರಶೈವ ಸಾಹಿತ್ಯ ಕ್ಷೇತ್ರ ಚಿದಾನಂದಮೂರ್ತಿಯವರ ಆಡುಂಬೊಲ. ವಚನಸಾಹಿತ್ಯದ ಉಗಮದಿಂದ, ಆಧುನಿಕ ಪೂರ್ವಕಾಲದ ವೀರಶೈವ ಶಿಕ್ಷಣ ವ್ಯವಸ್ಥೆಯವರೆಗೆ ವರ ಈ ಸಂಬಂಧದ ಬರಹ ವ್ಯಾಪಿಸಿದೆ. `ಶೂನ್ಯ ಸಂಪಾದನೆಯನ್ನು ಕುರಿತು, `ವಚನ ಸಾಹಿತ್ಯ, `ವಚನ ಶೋಧ-1, `ವಚನ ಶೋಧ-2 ವೀರಶೈವ ಧರ್ಮ ಭಾರತೀಯ ಸಂಸ್ಕøತಿ, ಇವು ಈ ಸಂಬಂಧದ ಕೃತಿಗಳು.

	ಚಿದಾನಂದಮೂರ್ತಿ ಜಾನಪದ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. `ಗ್ರಾಮೀಣ ಹಾಗೂ `ಪಗರಣ ಮತ್ತು ಇತರ ಸಂಪ್ರದಾಯಗಳು ಎಂಬ ಎರಡು ಪುಸ್ತಕಗಳಲ್ಲಿ ಅವರ ಈ ಸಂಬಂಧವಾದ ಸಂಪ್ರಬಂಧಗಳು ಸಂಗ್ರಹಗೊಂಡಿವೆ.

	ಚಿದಾನಂದಮೂರ್ತಿಯವರು ತುಂಬ ದೊಡ್ಡ ಸಂಶೋಧಕರಾಗಿ ವಿದ್ವಾಂಸರಾಗಿ ಹೆಸರು ಗಳಿಸಿದ್ದು ಶಾಸನ, ಕರ್ನಾಟಕ ಸಂಸ್ಕøತಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರಿಂದ. ಆರಂಭದಲ್ಲಿ ಅವರು ಸಂಶೋಧನೆಯನ್ನು ಮಾಡತೊಡಗಿದ್ದು ಈ ಸಂಬಂಧವಾದ ವಿಷಯಗಳನ್ನು ಆರಿಸಿಕೊಂಡೇ. ಅವರ `ಸಂಶೋಧನ ತರಂಗದ ಎರಡೂ ಸಂಪುಟಗಳಲ್ಲಿ ಇಂಥ ಲೇಖನಗಳಿವೆ. ಕ್ರಿ.ಶ. 450ರಿಂದ ಕ್ರಿ.ಶ. 1150ರವರೆಗಿನ ಸಾವಿರಾರು ಶಾಸನಗಳನ್ನು ಅವಲಂಬಿಸಿ ರಚಿಸಿದ ಅವರ ಪಿಎಚ್.ಡಿ ಪ್ರಬಂಧವಾದ `ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ ಸಂಸ್ಕøತಿ ಶೋಧ ಕ್ಷೇತ್ರದ ಮಹಾಸ್ತಂಭ; ಆಕರಗ್ರಂಥ. ಮೂರ್ತಿಗಳ ಸಾಂಸ್ಕøತಿಕ ಸಂಶೋಧನೆ ಯಾವ ಯಾವ ಆಯಾಮಗಳನ್ನು ಪಡೆಯಬಹುದು ಎಂಬುದಕ್ಕೆ `ಪೂರ್ಣ ಸೂರ್ಯಗ್ರಹಣದ `ಸಮಾಜೋ ಸಾಂಸ್ಕøತಿಕ ಅಧ್ಯಯನ ಒಂದು ನಿದರ್ಶನ.

	ಕನ್ನಡ ಚಳುವಳಿಗೆ ಸಂಬಂಧಿಸಿದಂತೆ ಕೂಡ ಚಿದಾನಂದಮೂರ್ತಿಯವರ ಕೆಲಸ ಗಣ್ಯ ಹಾಗೂ ಗೌರವ ಪೂರ್ಣವಾಗಿವೆ. ನಾಡು, ನುಡಿಗಳಿಗೆ ಸಂಬಂಧಿಸಿದಂತೆ ಅವರು ಹೋರಾಡಿದ್ದಾರೆ, ಕನ್ನಡ ಶಕ್ತಿ ಕೇಂದ್ರ ಕಟ್ಟಿದ್ದಾರೆ, ಪ್ರಾಣತ್ಯಾಗದ ಹಂತದವರೆಗೆ ಹೋಗಿದ್ದಾರೆ. ಕನ್ನಡಾಯಣ, ಭಾಷಿಕ ಬೃಹತ್ ಕರ್ನಾಟಕ, ಕನ್ನಡ-ನೇಪಾಳ.

	ಚಿದಾನಂದಮೂರ್ತಿಯವರ ರಚನೆಗಳು ವಿವಿಧ ಪ್ರಶಸ್ತಿ, ಬಹುಮಾನ, ಪುರಸ್ಕಾರಗಳಿಗೆ ಪಾತ್ರವಾಗಿವೆ; ಅವರನ್ನು ಕನ್ನಡಿಗರು ವಿವಿಧ ಬಗೆಗಳಲ್ಲಿ ಗೌರವಿಸಿದ್ದಾರೆ. ಅವರ `ಶೂನ್ಯಸಂಪಾದನೆಯನ್ನು ಕುರಿತು, `ಸಂಶೋಧನ ತರಂಗ, `ಪೂರ್ಣಸೂರ್ಯಗ್ರಹಣ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. `ಭಾಷಾವಿಜ್ಞಾನದ ಮೂಲತತ್ವಗಳಿಗೆ ದೇವರಾಜ ಬಹುದ್ದೂರ್ ಪ್ರಶಸ್ತಿ ಬಂದಿದೆ. `ಗ್ರಾಮೀಣಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ತೀ.ನಂ.ಶ್ರೀ. ಸ್ಮಾರಕ ಬಹುಮಾನ, `ಲಿಂಗಾಯತ ಅಧ್ಯಯನಗಳಿಗೆ ಶಿವರಾತ್ರೀಶ್ವರ ದತ್ತಿ ಪ್ರಶಸ್ತಿ, ಅವರ `ಹೊಸತು ಹೊಸತು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ವಜ್ರಮಹೋತ್ಸವ ಗೌರವವನ್ನು (1978), ಕರ್ನಾಟಕ ಸಾಹಿತ್ಯ ಅಕಾಡೆಮಿ ತನ್ನ ಗೌರವವನ್ನು (1984), ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು (1985), ಭೂಸನೂರಮಠ ಸ್ಮಾರಕ ಗೌರವವನ್ನು (1993), ಬಸವವೇದಿಕೆಯ `ಸಾಹಿತ್ಯಶ್ರೀ ಬಿರುದನ್ನು, ಅನಕೃ ಪ್ರತಿಷ್ಠಾನ ತನ್ನ ಪ್ರಶಸ್ತಿಯನ್ನು (1999), ಗೋವಿಂದ ಪೈ ಸಂಶೋಧನ ಕೇಂದ್ರ ಸೇಡಿಯಾಪು ಪ್ರಶಸ್ತಿಯನ್ನು (2000) ಸಲ್ಲಿಸಿ ಮೂರ್ತಿಗಳನ್ನೂ ಅವರ ಸಾಹಿತ್ಯ ಸೇವೆಯನ್ನು ನೆನೆದಿವೆ. ಅವರಿಗೆ ಕರ್ನಾಟಕ ಸರ್ಕಾರ `ಪಂಪ ಪ್ರಶಸ್ತಿ ನೀಡಿ ಗೌರವಿಸಿದೆ. ಮೂರ್ತಿಗಳ ಶಿಷ್ಯರೂ, ಮಿತ್ರರೂ, ಅಭಿಮಾನಿಗಳು 1991ರಲ್ಲಿ `ಸಂಶೋಧನ ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಅರ್ಪಿಸಿ ತಮ್ಮ ಪ್ರೀತಿ, ಗೌರವ, ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಹೆಸರಿನಲ್ಲಿ `ಚಿದಾನಂದ ಪ್ರಶಸ್ತಿ ಎಂಬುದನ್ನು ಸ್ಥಾಪಿಸಿ ಚಿದಾನಂದಮೂರ್ತಿಯವರ ಜನ್ಮದಿನವಾದ ಮೇ ಹತ್ತರಂದು ಪ್ರತಿವರ್ಷ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಅದನ್ನು ನೀಡುತ್ತ ಬಂದಿದ್ದಾರೆ. ಈ ಎಲ್ಲವೂ ನಾಡವರು ಅವರ ಬಗ್ಗೆ ಇಟ್ಟಿರುವ ಪ್ರೀತಿ ಅಭಿಮಾನಗಳ ಕುರುಹಾಗಿವೆ.
										(ಎನ್.ಎಸ್.ತಾರಾನಾಥ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ